ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುತ್ತಲೂ ಭದ್ರತಾ ಪಡೆಗಳ ಸರ್ಪಗಾವಲು, ತಪ್ಪಿಸಿಕೊಳ್ಳಲು ದಾರಿಯಿಲ್ಲದ ಪರಿಸ್ಥಿತಿ, ಮತ್ತೊಂದೆಡೆ ಜೀವ ಉಳಿಸಿಕೊಳ್ಳಲು ಸೇನೆಯಿಂದ ಶರಣಾಗತಿಯ ಮನವಿ. ಆದರೂ ಬಂದೂಕು ಕೆಳಗಿಡಲು ಉಗ್ರ ಕಮಾಂಡರ್ ಸಿದ್ಧನಾಗಿರಲಿಲ್ಲ.
ವಿಡಿಯೋ ಕಾಲ್ನಲ್ಲೂ ಶರಣಾಗಲು ಒಪ್ಪದ ಉಗ್ರ
ಹೌದು! ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದ ಕಾರ್ಯಾಚರಣೆ ವೇಳೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ಗೆ ಸೇನಾ ಅಧಿಕಾರಿಗಳು ವಿಡಿಯೋ ಕಾಲ್ ಮೂಲಕ ಶರಣಾಗುವಂತೆ ಮನವಿ ಮಾಡಿದರೂ ಆತ ನಿರಾಕರಿಸಿದ್ದಾನೆ. ಈ ಸಂಭಾಷಣೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಂಘರ್ಷ ಮಾಡುವ ಅಗತ್ಯವೇನು?
ಶರಣಾದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದ ಅಧಿಕಾರಿ, ಸಂಘರ್ಷ ಮುಂದುವರಿಸುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ನಾವು ನಿನ್ನೊಂದಿಗಿದ್ದೇವೆ, ಶರಣಾಗು. ಹೀಗೆ ಮಾಡುತ್ತಿರುವುದೇಕೆ? ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ.
ಆದರೆ, ಸೇನಾ ಅಧಿಕಾರಿಯ ಮಾತಿಗೆ ಭಟ್ ಮಣಿದಿಲ್ಲ. ಧಾರ್ಮಿಕ ಉಲ್ಲೇಖಗಳನ್ನು ಮಾಡುತ್ತಾ, ತಾನು ಅಲ್ಲಾಹ್ನನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ. ಕುರಾನ್ನ ವಚನವೊಂದನ್ನು ಪಠಿಸಿದ ಆತ, ‘ನಾನು ಹೊರಟಿದ್ದೇನೆ, ನನಗೆ ತುಂಬಾ ಸಂತೋಷವಾಗಿದೆ. ನಾನು ಅಲ್ಲಾಹ್ನ ಬಳಿಗೆ ಹೋಗಬೇಕು’ ಎಂದು ಪ್ರತಿಕ್ರಿಯಿಸಿದ್ದಾನೆ. ಕೊನೆಗೂ ‘ಅಲ್ಲಾಹ್ ನನಗೆ ಸಾಕು’ ಎಂದು ಹೇಳುವ ಮೂಲಕ ಶರಣಾಗತಿಯ ಮನವಿಯನ್ನು ತಿರಸ್ಕರಿಸಿದ್ದ. ಅಷ್ಟೇ ಅಲ್ಲ ಮಸೀದಿಯೊಳಗಿಂದಲೇ ಗುಂಡಿನ ದಾಳಿ ನಡೆಸಿದ್ದ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮೂಲಗಳು ತಿಳಿಸಿವೆ.
ಕುಲ್ಗಾಮ್ನಲ್ಲಿ ಗುಂಡಿನ ಚಕಮಕಿ
ಬುಧವಾರ ಮುಂಜಾನೆ ಕುಲ್ಗಾಮ್ನಲ್ಲಿ ಉಗ್ರರಿಗಾಗಿ ಶೋಧ ನಡೆಸುತ್ತಿದ್ದ ಭದ್ರತಾ ಪಡೆಗಳಿಗೆ ಮತ್ತೆ ಉಗ್ರರ ಸುಳಿವು ಸಿಕ್ಕಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ. ನವೆಂಬರ್ 16ರಂದು ಲರೂ ಬೈಪಾಸ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಿಂದ ಲತೀಫ್ ಭಟ್ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಅಂದು ಆತನ ಸಹಚರ ಉಮರ್ ನಿಸಾರ್ ದಾರ್ ಹತನಾಗಿದ್ದ.
ನವೆಂಬರ್ 11ರಂದು ಅಖ್ರಾನ್ ಗ್ರಾಮದಲ್ಲಿ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗೆ ಸಂಬಂಧಿಸಿದಂತೆ ದಾರ್, ಭಟ್ಗೆ ಆಶ್ರಯ ಮತ್ತು ಅಗತ್ಯ ನೆರವು ನೀಡಿದ್ದ ಎಂಬ ಶಂಕೆಯಿದೆ.
ಯಾರು ಈ ಲತೀಫ್ ಭಟ್?
ಈತ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿವಾಸಿ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಸೇರುವ ಮೊದಲು ಬಡಗಿಯಾಗಿ ಕೆಲಸ ಮಾಡುತ್ತಿದ್ದ ಈತ 2025ರ ನವೆಂಬರ್ 18ರಂದು ಮನೆಯಿಂದ ನಾಪತ್ತೆಯಾಗಿದ್ದ. ಅದೇ ದಿನ ಲಷ್ಕರ್-ಎ-ತೊಯ್ಬಾ ಸಂಘಟನೆ ಸೇರಿದ್ದ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ. ಇದೀಗ 2026ರ ನವೆಂಬರ್ 18ರಂದು ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ.



