ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆಟ್ರೋಲ್ ಖರೀದಿಸುವ ಗ್ರಾಹಕರಿಗೆ ತಾವು ಬಳಸುತ್ತಿರುವ ಇಂಧನದಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಾಗಿದೆ ಎಂಬ ಮಾಹಿತಿ ತಿಳಿಯುವ ಹಕ್ಕಿದೆ. ಆದರೆ ಪೆಟ್ರೋಲ್ ಪಂಪ್ಗಳಲ್ಲಿ ಈ ವಿವರ ಸ್ಪಷ್ಟವಾಗಿ ಲಭ್ಯವಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಗುಣಮಟ್ಟ ಮತ್ತು ಎಥೆನಾಲ್ ಮಿಶ್ರಣದ ಪ್ರಮಾಣದಲ್ಲಿ ಪಾರದರ್ಶಕತೆ ಕಾಪಾಡುವಂತೆ ಶಾಸಕ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ಗ್ರಾಹಕರ ಹಿತದೃಷ್ಟಿಯಿಂದ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕರ್ನಾಟಕದ ಐದು ಪ್ರಮುಖ ಬೇಡಿಕೆಗಳು:
- ಪೆಟ್ರೋಲ್ ಬಂಕ್ಗಳಲ್ಲಿ ಮಾಹಿತಿ: ಪ್ರತಿ ಪೆಟ್ರೋಲ್ ಬಂಕ್ನಲ್ಲೂ ಇಂಧನದಲ್ಲಿರುವ ನಿಖರ ಎಥೆನಾಲ್ ಪ್ರಮಾಣವನ್ನು ಪ್ರದರ್ಶಿಸಬೇಕು.
- ಬಿಲ್ನಲ್ಲೂ ಪ್ರಮಾಣ ನಮೂದಿಸಿ: ಗ್ರಾಹಕರಿಗೆ ನೀಡುವ ಪ್ರತಿಯೊಂದು ಇಂಧನ ಬಿಲ್ನಲ್ಲೂ ಎಥೆನಾಲ್ ಪ್ರಮಾಣವನ್ನು ಮುದ್ರಿಸಬೇಕು.
- E10 ಪೆಟ್ರೋಲ್ ಲಭ್ಯತೆ: E20 ಪೆಟ್ರೋಲ್ ಜೊತೆಗೆ E10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಆಯ್ಕೆಯನ್ನೂ ಗ್ರಾಹಕರಿಗೆ ಒದಗಿಸಬೇಕು.
- ಸ್ವತಂತ್ರ ಪರೀಕ್ಷೆ: NABL ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಇಂಧನದ ಗುಣಮಟ್ಟವನ್ನು ಸ್ವತಂತ್ರವಾಗಿ ಪರೀಕ್ಷಿಸಬೇಕು.
- ಪರಿಹಾರ ನಿಧಿ ಸ್ಥಾಪನೆ: ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಲು ವಿಶೇಷ E20 ಪರಿಹಾರ ನಿಧಿ ಸ್ಥಾಪಿಸಬೇಕು.
ಗ್ರಾಹಕರ ಹಿತಾಸಕ್ತಿಯೇ ಮುಖ್ಯ
ತಾವು ಖರೀದಿಸುತ್ತಿರುವ ಇಂಧನದ ಗುಣಮಟ್ಟ ಮತ್ತು ಅದರಲ್ಲಿರುವ ಎಥೆನಾಲ್ ಪ್ರಮಾಣ ತಿಳಿದುಕೊಳ್ಳುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು. ಹಣ ಪಾವತಿಸಿ ಖರೀದಿಸುವ ಪ್ರತಿಯೊಂದು ಹನಿ ಇಂಧನಕ್ಕೂ ಸೂಕ್ತ ಗುಣಮಟ್ಟ ಹಾಗೂ ಪಾರದರ್ಶಕತೆ ಇರಬೇಕು ಎಂಬುದು ಕರ್ನಾಟಕದ ನಿಲುವಾಗಿದೆ.
ಈ ಮೂಲಕ ಇಂಧನ ನೀತಿಯಲ್ಲಿ ಗ್ರಾಹಕರ ಹಕ್ಕು, ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



