33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

ಸ್ಪಾ ಹೆಸರಿನಲ್ಲಿ ಅಕ್ರಮ ದಂಧೆ ಆರೋಪ: ಸಿಸಿಬಿ ದಾಳಿ, ನಾಲ್ವರು ಯುವತಿಯರ ರಕ್ಷಣೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಆರ್‌ಪಿಡಿ ಕ್ರಾಸ್‌ನಲ್ಲಿರುವ ಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಸ್ಪಾ ಮಾಲೀಕ ಹಾಗೂ ಮ್ಯಾನೇಜರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆರ್‌ಪಿಡಿ ಕ್ರಾಸ್‌ನಲ್ಲಿರುವ ಡಿವೈನ್ ಸಲೂನ್ ಆ್ಯಂಡ್ ಸ್ಪಾದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ನಾಯಕ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದೆ.

ದಾಳಿಯ ವೇಳೆ ಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂಬುದು ಬೆಳಕಿಗೆ ಬಂದಿದೆ.‌ ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ಈ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ದಾಳಿ ಸಂದರ್ಭದಲ್ಲಿ ಗುಜರಾತ್ ಹಾಗೂ ಮುಂಬೈ ಮೂಲದವರು ಎನ್ನಲಾದ ನಾಲ್ವರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಇದನ್ನೂ ಓದಿ:

ಅಕ್ರಮ ಚಟುವಟಿಕೆಯ ಹಿಂದೆ ಸ್ಪಾ ಮಾಲೀಕ ಹಾಗೂ ಮ್ಯಾನೇಜರ್ ಪಾತ್ರವಿರುವ ಶಂಕೆಯ ಮೇರೆಗೆ ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಮುಂದಿನ ತನಿಖೆಗಾಗಿ ಸಿಸಿಬಿ ಪೊಲೀಸರು ಪ್ರಕರಣವನ್ನು ಟಿಳಕವಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಅಲ್ಲಿ ಪ್ರಕರಣ ದಾಖಲಾಗಿದೆ. ಈ ಅಕ್ರಮ ಚಟುವಟಿಕೆಯಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಸಲೂನ್ ಮತ್ತು ಸ್ಪಾ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.

Must Read