33.5 C
Mangalore
Wednesday, November 18, 2026
33.5 C
Mangalore
Wednesday, November 18, 2026

ಆನ್‌ಲೈನ್‌ನಲ್ಲಿ ಸ್ಫೋಟಕ ರಾಸಾಯನಿಕಗಳನ್ನು ಮಾರಾಟ ಮಾಡಿದರೆ ಹುಷಾರ್! ಸಚಿವ ಜೋಶಿ ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯಾವುದೇ ಸುರಕ್ಷತಾ ಪರಿಶೀಲನೆ ಅಥವಾ ಸೂಕ್ತ ಪರವಾನಗಿ ದೃಢೀಕರಣವಿಲ್ಲದೆ ಆನ್‌ಲೈನ್ ವೇದಿಕೆಗಳಲ್ಲಿ ಸ್ಫೋಟಕ ರಾಸಾಯನಿಕಗಳ ಮಾರಾಟಕ್ಕೆ ಅವಕಾಶ ನೀಡಿದ ಪ್ರಕರಣದಲ್ಲಿ ExportersIndia.comಗೆ ಹಿನ್ನಡೆಯಾಗಿದೆ.

ಕಂಪನಿಗೆ 20 ಲಕ್ಷ ರೂ. ದಂಡ ವಿಧಿಸಿದ್ದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಆದೇಶವನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC) ಎತ್ತಿಹಿಡಿದಿದೆ. ದಂಡ ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನೂ ಆಯೋಗ ವಜಾಗೊಳಿಸಿದೆ.

ಕಂಪನಿಗೆ 20 ಲಕ್ಷ ರೂ. ದಂಡ ಖಚಿತ

ExportersIndia.com ನಿರ್ವಹಿಸುವ Weblink.In Pvt Ltd ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿತ್ತು. ಪ್ರತಿ ಆದೇಶದಡಿ 10 ಲಕ್ಷ ರೂ.ನಂತೆ ಒಟ್ಟು 20 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ, ಅಪಾಯಕಾರಿ ರಾಸಾಯನಿಕಗಳ ಪಟ್ಟಿ, ಜಾಹೀರಾತು ಮತ್ತು ಮಾರಾಟಕ್ಕೆ ನೆರವಾಗುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಿತ್ತು.

ಈ ಆದೇಶಗಳನ್ನು ಪ್ರಶ್ನಿಸಿ ಕಂಪನಿ NCDRC ಮೊರೆ ಹೋಗಿತ್ತು. ಆದರೆ ನವೆಂಬರ್ 12ರಂದು ಹೊರಬಿದ್ದ ಎರಡು ಆದೇಶಗಳಲ್ಲಿ ಆಯೋಗ ಮೇಲ್ಮನವಿಗಳನ್ನು ತಿರಸ್ಕರಿಸಿ CCPA ಕ್ರಮವನ್ನು ಎತ್ತಿಹಿಡಿದಿದೆ.

ಯಾವ ರಾಸಾಯನಿಕಗಳ ಮಾರಾಟಕ್ಕೆ ಆಕ್ಷೇಪ?

ಅಮೋನಿಯಂ ನೈಟ್ರೇಟ್, ಗನ್ ಪೌಡರ್, ಪಿಕ್ರಿಕ್ ಆಸಿಡ್ ಮತ್ತು PETN ಸೇರಿದಂತೆ ಅಪಾಯಕಾರಿ ವಸ್ತುಗಳು ಆನ್‌ಲೈನ್ ವೇದಿಕೆಗಳಲ್ಲಿ ಲಭ್ಯವಿರುವುದನ್ನು CCPA ಪರಿಶೀಲಿಸಿತ್ತು. ಮಾರಾಟಗಾರರ PESO ಪರವಾನಗಿ ಪರಿಶೀಲನೆ, ಖರೀದಿದಾರರ ಗುರುತು ದೃಢೀಕರಣ ಹಾಗೂ ವಹಿವಾಟಿನ ದಾಖಲೆ ನಿರ್ವಹಣೆಯಲ್ಲಿ ಲೋಪಗಳಿರುವುದನ್ನು ಅಧಿಕಾರಿಗಳು ಗುರುತಿಸಿದ್ದರು.

ಇದನ್ನೂ ಓದಿ:

ನೆಪ ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ: ಜೋಶಿ

ಗ್ರಾಹಕ ಸಂರಕ್ಷಣಾ ಕಾನೂನಿನಡಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಇ-ಕಾಮರ್ಸ್ ವೇದಿಕೆಗಳು ತಾವು ಕೇವಲ ಮಧ್ಯವರ್ತಿಗಳು ಎಂಬ ನೆಪ ಹೇಳುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ. ಆನ್‌ಲೈನ್ ವೇದಿಕೆಗಳಲ್ಲಿ ಅಪಾಯಕಾರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡುವ ಸಂಸ್ಥೆಗಳು ಸೂಕ್ತ ಜವಾಬ್ದಾರಿ ಹೊರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ಫೋಟಕ ವಸ್ತುಗಳ ಮಾರಾಟ ಕಂಡರೆ 1915ಕ್ಕೆ ದೂರು ನೀಡಿ

ಅಪಾಯಕಾರಿ ರಾಸಾಯನಿಕಗಳು ಮತ್ತು ಸ್ಫೋಟಕ ವಸ್ತುಗಳು ಆನ್‌ಲೈನ್‌ನಲ್ಲಿ ನಿಯಂತ್ರಣವಿಲ್ಲದೆ ಮಾರಾಟವಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಇಂತಹ ವಸ್ತುಗಳನ್ನು ಯಾವುದೇ ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟಕ್ಕೆ ಇರಿಸಿರುವುದು ಕಂಡುಬಂದರೆ ಸಾರ್ವಜನಿಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಮನವಿ ಮಾಡಿದ್ದಾರೆ.

Must Read