32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ದೇವನಹಳ್ಳಿಯಲ್ಲಿ ಬೃಹತ್ ವಿಮಾನ ನಿರ್ವಹಣಾ ಘಟಕಕ್ಕೆ ಎಂ.ಬಿ. ಪಾಟೀಲ್ ಚಾಲನೆ: 2,100 ಮಂದಿಗೆ ಉದ್ಯೋಗ ಭಾಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ವಿಮಾನಯಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ಮಹತ್ವದ ಯೋಜನೆಯೊಂದಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ.

ಜಾಗತಿಕ ಏರೋಸ್ಪೇಸ್ ಸಂಸ್ಥೆ ಕಾಲಿನ್ಸ್ ಏರೋಸ್ಪೇಸ್, ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಭಾರತದ ತನ್ನ ಮೊದಲ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರಿಶೀಲನಾ (MRO) ಘಟಕದ ಕಾಮಗಾರಿಯನ್ನು ಆರಂಭಿಸಿದೆ. ಈ ಯೋಜನೆಯಿಂದ ಸುಮಾರು 2,100 ಮಂದಿಗೆ ನೇರ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ನಡೆದ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಘಟಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 26 ಎಕರೆ ಭೂಮಿಯನ್ನು ಕಂಪನಿಗೆ ಹಂಚಿಕೆ ಮಾಡಿದೆ ಎಂದು ತಿಳಿಸಿದರು. ಈ ಕೇಂದ್ರವು ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗೆ ಸೇವೆ ಒದಗಿಸುವುದರ ಜತೆಗೆ ಕರ್ನಾಟಕದ ಏರೋಸ್ಪೇಸ್ ರಫ್ತು ವಲಯಕ್ಕೂ ಉತ್ತೇಜನ ನೀಡಲಿದೆ ಎಂದರು.

ವಿಮಾನ ಮತ್ತು ರಕ್ಷಣಾ ಕ್ಷೇತ್ರಕ್ಕೆ ತಾಂತ್ರಿಕ ಬಲ

ಈ ನೂತನ ಘಟಕದಲ್ಲಿ ಎಟಿಆರ್ 42, ಎಟಿಆರ್ 72 ಪ್ರಾದೇಶಿಕ ವಿಮಾನಗಳು ಹಾಗೂ ಸಿ295 ಸೇನಾ ವಿಮಾನಗಳಲ್ಲಿ ಬಳಸುವ 568ಎಫ್ ಮಾದರಿಯ ಪ್ರೊಪೆಲ್ಲರ್‌ಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಡೆಯಲಿದೆ. ಇದರಿಂದ ವಿಮಾನಯಾನ ನಿರ್ವಹಣಾ ಕ್ಷೇತ್ರದಲ್ಲಿ ಬೆಂಗಳೂರಿನ ಪಾತ್ರ ಮತ್ತಷ್ಟು ವಿಸ್ತಾರವಾಗಲಿದೆ. ಜತೆಗೆ ರಾಜ್ಯದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಹೊಸ ವ್ಯಾಪಾರ ಅವಕಾಶಗಳು ದೊರೆಯಲಿವೆ.

ಇದನ್ನೂ ಓದಿ:

ಕಳೆದ ಐದು ವರ್ಷಗಳಲ್ಲಿ ಕಾಲಿನ್ಸ್ ಏರೋಸ್ಪೇಸ್ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲಿನ ಕಂಪನಿಯ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಗಿತ್ತು ಎಂದು ಪಾಟೀಲ್ ತಿಳಿಸಿದರು.

2031ರ ವೇಳೆಗೆ 60 ಸಾವಿರ ಉದ್ಯೋಗ ಸೃಷ್ಟಿ ಗುರಿ

ಭಾರತದ ಏರೋಸ್ಪೇಸ್ ವಲಯದ ಶೇ.65ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ. ರಾಜ್ಯದ ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಡಿ 2031ರ ವೇಳೆಗೆ 60 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವ ಹಾಗೂ 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.

ಮುಂದಿನ ಏಪ್ರಿಲ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಜಾಗತಿಕ ವಿಮಾನ ತಯಾರಕರು, ಪೂರೈಕೆದಾರರು ಮತ್ತು ಸ್ಥಳೀಯ ಉದ್ಯಮಗಳನ್ನು ಸಂಪರ್ಕಿಸುವ ವಿಶೇಷ ಸಮಾವೇಶ ಆಯೋಜಿಸಲು ಸರ್ಕಾರ ಯೋಜಿಸಿದೆ. ನಾಗರಿಕ ವಿಮಾನಯಾನ ನೀತಿಯನ್ನೂ ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಅನುಮೋದನೆಗೆ ಮಂಡಿಸುವ ನಿರೀಕ್ಷೆಯಿದೆ.

Must Read