28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

ರೈಲುಗಳಲ್ಲಿ ಒಂಟಿಯಾಗಿ ಪ್ರಯಾಣ ಮಾಡುವ ವೇಳೆ ಸುರಕ್ಷಿತವಾಗಿರುವುದು ಹೇಗೆ? ಟಿಪ್ಸ್‌ ಇಲ್ಲಿದೆ

ರೈಲಿನ ಪ್ರಯಾಣ ಎಲ್ಲರಿಗೂ ಸುಖಕರವಾಗಿ ಇರುವುದಿಲ್ಲ. ಕೆಲವೊಮ್ಮೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಸಾಕಷ್ಟು ಹಾನಿ ಉಂಟಾಗುತ್ತದೆ. ರೈಲು ಹತ್ತುವ ಪ್ರಕ್ರಿಯೆಯಿಂದ ರೈಲು ಇಳಿಯುವವರೆಗೆ ಜಾಗರೂಕರಾಗಿರಿ.ಪ್ರತಿದಿನ ಲಕ್ಷಾಂತರ ಜನರು ಉದ್ಯೋಗ, ಶಿಕ್ಷಣ, ಪ್ರವಾಸ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ರೈಲಿನಲ್ಲಿ ಸಂಚರಿಸುತ್ತಾರೆ. ಆದರೆ ಪ್ರಯಾಣದ ವೇಳೆ ವಹಿಸುವ ಸಣ್ಣ ನಿರ್ಲಕ್ಷ್ಯವೂ ಕೆಲವೊಮ್ಮೆ ಅಪಾಯಕ್ಕೆ ಆಹ್ವಾನ ನೀಡಬಹುದು. ಹೀಗಾಗಿ ರೈಲು ನಿಲ್ದಾಣದಿಂದ ಹಿಡಿದು ಗಮ್ಯಸ್ಥಾನ ತಲುಪುವವರೆಗೂ ಪ್ರಯಾಣಿಕರು ಕೆಲವು ಪ್ರಮುಖ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ಯಾವೆಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ..

ರೈಲಿಗಾಗಿ ಕಾಯುವಾಗ ಪ್ಲಾಟ್‌ಫಾರ್ಮ್‌ನ ಸುರಕ್ಷತಾ ಗೆರೆಯ ಹಿಂದೆ ನಿಲ್ಲಬೇಕು. ರೈಲು ಬರುತ್ತಿರುವಾಗ ಅಥವಾ ಹೊರಡುತ್ತಿರುವಾಗ ಹಳಿಯ ಸಮೀಪ ಹೋಗುವುದು, ಅಂಚಿನಲ್ಲಿ ನಿಲ್ಲುವುದು ಅಪಾಯಕಾರಿ. ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ಅಥವಾ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ರೈಲಿಗಾಗಿ ಕಾಯುವುದನ್ನು ತಪ್ಪಿಸುವುದು ಉತ್ತಮ. ರೈಲು ಸಂಪೂರ್ಣವಾಗಿ ನಿಂತ ಬಳಿಕವೇ ಹತ್ತಬೇಕು ಮತ್ತು ಇಳಿಯಬೇಕು. ರೈಲು ಚಲಿಸಲು ಆರಂಭಿಸಿದಾಗ ಹತ್ತಲು ಪ್ರಯತ್ನಿಸುವುದು ಅಥವಾ ನಿಲ್ದಾಣ ತಲುಪುವ ಮೊದಲೇ ಇಳಿಯುವುದು ಅಪಾಯಕಾರಿ. ಹಿರಿಯರು, ಮಕ್ಕಳು ಹಾಗೂ ದೈಹಿಕವಾಗಿ ಅಸಹಾಯಕರಾಗಿರುವ ಪ್ರಯಾಣಿಕರಿಗೆ ನೆರವು ನೀಡಬೇಕು.

ಪ್ರಯಾಣದ ವೇಳೆ ರೈಲಿನ ಬಾಗಿಲಿನಲ್ಲಿ ನಿಲ್ಲುವುದು, ಹೊರಗೆ ಬಾಗುವುದು ಅಥವಾ ಬಾಗಿಲಿನ ಬಳಿ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು. ರೈಲು ಚಲಿಸುತ್ತಿರುವಾಗ ಫೋಟೊ ಅಥವಾ ವಿಡಿಯೊ ತೆಗೆಯುವ ಉದ್ದೇಶದಿಂದ ಅಪಾಯಕಾರಿ ರೀತಿಯಲ್ಲಿ ಹೊರಗೆ ಕೈ ಚಾಚಬಾರದು. ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದಕ್ಕೆ ತೆರಳಲು ಫುಟ್‌ಓವರ್‌ ಬ್ರಿಡ್ಜ್‌, ಸಬ್‌ವೇ ಅಥವಾ ಅಧಿಕೃತ ದಾರಿಯನ್ನೇ ಬಳಸಬೇಕು. ರೈಲು ಹಳಿಗಳ ಮೇಲೆ ನಡೆದು ದಾಟುವುದು ಅಥವಾ ನಿಂತಿರುವ ರೈಲಿನ ಕೆಳಗೆ ಹಾದುಹೋಗುವುದು ಜೀವಕ್ಕೆ ಅಪಾಯಕಾರಿಯಾಗಬಹುದು.

ಪ್ರಯಾಣದ ವೇಳೆ ಬ್ಯಾಗ್‌, ಮೊಬೈಲ್‌, ಪರ್ಸ್‌ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಪರಿಚಿತರು ನೀಡುವ ಆಹಾರ ಅಥವಾ ಪಾನೀಯಗಳನ್ನು ಸ್ವೀಕರಿಸಬಾರದು. ನಿಮ್ಮ ವಸ್ತುಗಳನ್ನು ಅಪರಿಚಿತರ ವಶಕ್ಕೆ ನೀಡುವುದನ್ನೂ ತಪ್ಪಿಸಿ. ಅಪರಿಚಿತರಿಗೆ ಬ್ಯಾಗ್‌ ನೋಡಿಕೊಳ್ಳುವಂತೆ ಹೇಳಿ ಬಾತ್‌ರೂಮ್‌ಗೆ ಹೋಗಬೇಡಿ.ಅಪರಿಚಿತರಿಗೆ ನಿಮ್ಮ ಕೆಲಸ, ಊರು, ಏರಿಯಾ, ಕಚೇರಿ ಹೆಸರು ಎಲ್ಲವನ್ನೂ ನೀಡುವ ಅವಶ್ಯಕತೆ ಇಲ್ಲ.

ರೈಲಿನ ಬಾಗಿಲು, ಕಿಟಕಿ ಅಥವಾ ಪ್ಲಾಟ್‌ಫಾರ್ಮ್‌ನಿಂದ ಕಸ ಎಸೆಯಬಾರದು. ರೈಲಿನೊಳಗೆ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುವ ವಸ್ತುಗಳನ್ನು ಕೊಂಡೊಯ್ಯಬಾರದು. ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ.ರೈಲಿನಲ್ಲಿ ಬೆಂಕಿ, ಹೊಗೆ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಇತರ ಅಪಾಯ ಕಂಡುಬಂದರೆ ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ರೈಲ್ವೆ ನಿಯಮಗಳ ಪ್ರಕಾರ ತುರ್ತು ಅಲಾರಂ ವ್ಯವಸ್ಥೆಯನ್ನು ಬಳಸಬೇಕು. ಯಾವುದೇ ಕಾರಣವಿಲ್ಲದೆ ತುರ್ತು ಸರಪಳಿಯನ್ನು ಎಳೆಯಬಾರದು.

ಮಕ್ಕಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬರೇ ಬಿಡಬಾರದು. ರೈಲು ಹತ್ತುವಾಗ ಮತ್ತು ಇಳಿಯುವಾಗ ಅವರ ಕೈ ಹಿಡಿದುಕೊಳ್ಳಬೇಕು. ರೈಲಿನ ಬಾಗಿಲು, ಕಿಟಕಿ ಅಥವಾ ಮೆಟ್ಟಿಲುಗಳ ಬಳಿ ಆಟವಾಡಲು ಅವಕಾಶ ನೀಡಬಾರದು. ಮಕ್ಕಳನ್ನು ಕರೆದುಕೊಂಡು ಹೋದಮೇಲೆ ನಿಮ್ಮ ಮೊದಲ ನಿಗಾ ಮಕ್ಕಳ ಮೇಲಿರಲಿ. ಉಳಿದ ಕೆಲಸ ತದನಂತರ ಮಾಡಬಹುದಾಗಿದೆ. ಕ್ಷಣದಲ್ಲಿ ಡಿಸ್ಟ್ರಾಕ್ಟ್‌ ಆದರೆ ಕ್ಷಣದಲ್ಲಿ ಸಮಸ್ಯೆ ಉಂಟಾಗುತ್ತದೆ. ರೈಲು ಅಥವಾ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳ ಚಟುವಟಿಕೆಗಳು ಅಥವಾ ಸುರಕ್ಷತೆಗೆ ಧಕ್ಕೆ ತರುವ ಘಟನೆಗಳು ಕಂಡುಬಂದರೆ ಅವುಗಳನ್ನು ಮುಟ್ಟದೆ ಅಥವಾ ಸ್ವತಃ ಪರಿಶೀಲಿಸಲು ಹೋಗದೆ ರೈಲ್ವೆ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಬೇಕು.

ಗಮ್ಯಸ್ಥಾನ ತಲುಪುವ ಮುನ್ನವೇ ನಿಮ್ಮ ಲಗೇಜ್‌ ಮತ್ತು ವೈಯಕ್ತಿಕ ವಸ್ತುಗಳನ್ನು ಪರಿಶೀಲಿಸಿಕೊಳ್ಳಿ. ರೈಲು ಸಂಪೂರ್ಣವಾಗಿ ನಿಂತ ಬಳಿಕವೇ ಕೆಳಗಿಳಿಯಿರಿ. ನಿಲ್ದಾಣದಲ್ಲಿ ಇಳಿದ ನಂತರವೂ ಪ್ಲಾಟ್‌ಫಾರ್ಮ್‌ನ ಸುರಕ್ಷತಾ ನಿಯಮಗಳನ್ನು ಪಾಲಿಸಿ.

Must Read