28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

ಟೇಕ್‌ಆಫ್‌ ವೇಳೆ ಇಂಜಿನ್‌ನಲ್ಲಿ ದೋಷ: ಮಂಗಳೂರಿನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನ ದುರಂತ!

ಹೊಸದಿಗಂತ ವರದಿ ಮಂಗಳೂರು:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್‌ಆಫ್ ಆಗುವ ಕೊನೆಯ ಕ್ಷಣದಲ್ಲಿ ಇಂಡಿಗೋ ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಭಾರೀ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ 229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಇದ್ದರು. ಇಂದು ಸಂಜೆ 6.05ಕ್ಕೆ ವಿಮಾನ ಟೇಕ್‌ಆಫ್ ಆಗಬೇಕಿತ್ತು. ಆದರೆ ರನ್‌ವೇಯಲ್ಲಿ ಟೇಕ್‌ಆಫ್ ಪ್ರಕ್ರಿಯೆ ಆರಂಭಿಸುವ ಸಂದರ್ಭದಲ್ಲಿ ವಿಮಾನದ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ಸಮಯಪ್ರಜ್ಞೆ ಮೆರೆದು ವಿಮಾನಕ್ಕೆ ಬ್ರೇಕ್ ಹಾಕಿ ಟೇಕ್‌ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಬೇಗೆ ವಾಪಸ್ ಕರೆತಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣವು ಟೇಬಲ್‌ಟಾಪ್ ರನ್‌ವೇ ಹೊಂದಿರುವ ಹಿನ್ನೆಲೆಯಲ್ಲಿ ಈ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಪೈಲಟ್‌ನ ಸಮಯೋಚಿತ ನಿರ್ಧಾರದಿಂದ ವಿಮಾನದಲ್ಲಿದ್ದ 236 ಮಂದಿಯ ಜೀವ ಉಳಿದಿದೆ.

ಬಳಿಕ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಇಂಡಿಗೋ ಸಂಸ್ಥೆಯು ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ.

Must Read