32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಸೋನಿಯಾ-ರಾಜೀವ್ ಪ್ರೀತಿ ಕುರಿತು ರಾಹುಲ್ ಹೇಳಿಕೆಗೆ ಬಿಜೆಪಿ ಟೀಕೆ: ಶಿವ-ಪಾರ್ವತಿ ಚಿತ್ರ ಹಂಚಿಕೊಂಡು ರಾಗ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ನಡುವಿನ ಪ್ರೀತಿ, ಆತ್ಮೀಯತೆಯ ಕುರಿತು ನೀಡಿದ್ದ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಭಯ, ಕೋಪ ಹಾಗೂ ದ್ವೇಷ ತುಂಬಿಕೊಂಡಿದ್ದು, ಇದರಿಂದಾಗಿ ಅವರಿಗೆ ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಶಿವ ಮತ್ತು ಪಾರ್ವತಿಯರು ಚಿತ್ರವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರೀತಿಯ ಮಹತ್ವದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಭಯ, ಕೋಪ ಮತ್ತು ದ್ವೇಷಗಳು ಹೃದಯದಲ್ಲಿ ಒಂದು ಜಾಲವನ್ನು ನಿರ್ಮಿಸಿವೆ. ಅದು ಅವರಿಗೆ ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಅಡ್ಡಿಯಾಗಿದೆ. ನಿಜವಾದ ಹಿಂದೂವಾಗಿ ಈ ಜಾಲದಿಂದ ಅವರನ್ನು ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆ ಮೂಲಕ ಅವರ ಜೀವನದಲ್ಲೂ ಪ್ರೀತಿ ಮತ್ತು ಆತ್ಮೀಯತೆಯ ಅದ್ಭುತ ಸೌಂದರ್ಯ ಹಾಗೂ ಸಂತೋಷವನ್ನು ಅನುಭವಿಸುವಂತಾಗಬೇಕು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಸಂದೇಶದ ಕೊನೆಯಲ್ಲಿ ‘ಸತ್ಯಂ ಶಿವಂ ಸುಂದರಂ’ ಎಂದು ಉಲ್ಲೇಖಿಸಿದ್ದಾರೆ.

ಸೋನಿಯಾ-ರಾಜೀವ್ ಪ್ರೀತಿ ಕುರಿತು ಹೇಳಿಕೆಗೆ ಟೀಕೆ

ಸೋಮವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದರು. ಕುಟುಂಬದ ಊಟದ ಸಮಯದಲ್ಲಿ ತಂದೆಯ ಮಡಿಲಲ್ಲಿ ತಾಯಿ ಕುಳಿತುಕೊಳ್ಳುತ್ತಿದ್ದರು. ಇದನ್ನು ಸಹಜವೆಂದು ಭಾವಿಸಿದ್ದ ತಾವು ಸ್ನೇಹಿತರ ಮನೆಗೆ ಹೋದಾಗ ಅವರ ತಂದೆ-ತಾಯಿಯರು ಹಾಗೆ ಕುಳಿತುಕೊಳ್ಳದಿರುವುದನ್ನು ಕಂಡು ಅಚ್ಚರಿಪಟ್ಟಿದ್ದಾಗಿ ಹೇಳಿದ್ದರು.

ಈ ಹೇಳಿಕೆಯನ್ನು ಬಿಜೆಪಿ ನಾಯಕರು ಟೀಕಿಸಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ರಾಹುಲ್ ವಿರುದ್ಧ ವ್ಯಂಗ್ಯವಾಡಿದ್ದರು.

ರಾಜಕೀಯ ವಾಕ್ಸಮರಕ್ಕೆ ಹೊಸ ತಿರುವು

ಪೋಷಕರ ನಡುವಿನ ಆತ್ಮೀಯತೆಯ ಕುರಿತಾದ ವೈಯಕ್ತಿಕ ನೆನಪಿನಿಂದ ಆರಂಭವಾದ ವಿವಾದ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಗ್ದಾಳಿಗೆ ಮತ್ತಷ್ಟು ವೇದಿಕೆಯಾಗಿದೆ.

Must Read