November 6, 2026
Friday, November 6, 2026
spot_img

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಅಬ್ಬರ: ಆಂಧ್ರ ಕರಾವಳಿಗೆ ಚಂಡಮಾರುತದ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಾಬ್’ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಆತಂಕ ಹೆಚ್ಚಿಸಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 27ರಂದು ಚಂಡಮಾರುತ ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಅಕ್ಟೋಬರ್ 28ರ ಬೆಳಿಗ್ಗೆ ಯಾನಂ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಚಂಡಮಾರುತದ ಪ್ರಭಾವದಿಂದ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಅಕ್ಟೋಬರ್ 27 ಹಾಗೂ 28ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಒಡಿಶಾದ ಆರು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ

ಚಂಡಮಾರುತದ ಪರಿಣಾಮ ಎದುರಿಸಲು ಒಡಿಶಾ ಸರ್ಕಾರ ಗಂಜಾಂ, ಗಜಪತಿ, ರಾಯಗಡ, ಮಲ್ಕನ್‌ಗಿರಿ, ಕೋರಾಪುಟ್ ಮತ್ತು ನಬರಂಗ್‌ಪುರ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು, ನಿಯಂತ್ರಣ ಕೊಠಡಿಗಳನ್ನೂ ತೆರೆಯಲಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಕೆಲವು ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಅಕ್ಟೋಬರ್ 28 ಮತ್ತು 29ರಂದು ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

ತಮಿಳುನಾಡಿನಲ್ಲೂ ಮಳೆಯ ಎಚ್ಚರಿಕೆ

ಈಶಾನ್ಯ ಮಾನ್ಸೂನ್ ಚುರುಕಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

Must Read