32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಜ್ಯೂಸ್ ನಲ್ಲಿ ನಿದ್ದೆ ಮಾತ್ರೆ, ಬಾತ್ ರೂಮ್ ನಲ್ಲಿ ಹ*ತ್ಯೆ: 7 ಮಂದಿಯನ್ನು ಕೊಂ*ದವನ ಭಯಾನಕ ಪ್ಲಾನ್ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಂದೇ ಕುಟುಂಬದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಒಂದೊಂದೇ ಬೆಚ್ಚಿಬೀಳಿಸುವ ಸಂಗತಿಗಳು ಹೊರಬರುತ್ತಿವೆ.

ಸಂಬಂಧಿಕರನ್ನು ಮನೆಗೆ ಆಹ್ವಾನಿಸಿ, ಆತಿಥ್ಯದ ಹೆಸರಿನಲ್ಲಿ ಸಾವಿನ ಬಲೆ ಹೆಣೆದಿದ್ದ ಆರೋಪಿ ಕ್ಯಾಬ್ ಚಾಲಕ ಎಸ್. ಇಂದುಶೇಖರ್ (52) ಹತ್ಯೆಗಳಿಗೆ ರೂಪಿಸಿದ್ದ ಯೋಜನೆ ಇದೀಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

50 ನಿದ್ರೆ ಮಾತ್ರೆಗಳು, ಗೋಣಿ ಚೀಲಗಳ ಖರೀದಿ

ಪತ್ನಿ ಹಾಗೂ ಸಂಬಂಧಿಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇಂದುಶೇಖರ್, ಸಂತ್ರಸ್ತರು ಕಿರುಚಾಡಿ ಅಕ್ಕಪಕ್ಕದವರಿಗೆ ಸುಳಿವು ನೀಡದಂತೆ ಮೊದಲು ಅವರನ್ನು ಪ್ರಜ್ಞಾಹೀನರನ್ನಾಗಿಸಲು ನಿರ್ಧರಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಸುಮಾರು 50 ನಿದ್ರೆ ಮಾತ್ರೆಗಳು, ಗೋಣಿ ಚೀಲಗಳು, ಹಗ್ಗ ಹಾಗೂ ಇತರ ಸಾಮಗ್ರಿಗಳನ್ನು ಮುಂಚಿತವಾಗಿಯೇ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಮೊದಲು ತನ್ನ ಮನೆಯಲ್ಲೇ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ಇತರ ಸಂಬಂಧಿಕರನ್ನು ಬೇರೆ ಬೇರೆ ದಿನಗಳಲ್ಲಿ ಮನೆಗೆ ಕರೆಸಿಕೊಳ್ಳಲು ತನ್ನ ಅಪ್ರಾಪ್ತ ಪುತ್ರಿಯ ಮೂಲಕ ಫೋನ್ ಮಾಡಿಸಿದ್ದ. ಮಾಂಸಾಹಾರ ಊಟದ ಆಮಿಷವೊಡ್ಡಿ ಮನೆಗೆ ಆಹ್ವಾನಿಸಲಾಗುತ್ತಿತ್ತು. ಊಟ ಮುಗಿದ ಬಳಿಕ ನಿದ್ರೆ ಮಾತ್ರೆ ಬೆರೆಸಿದ ಸಿಹಿ ನಿಂಬೆ ಹಣ್ಣಿನ ರಸವನ್ನು ಆತನ ಮಗಳು ಸಂತ್ರಸ್ತರಿಗೆ ನೀಡುತ್ತಿದ್ದಳು ಎನ್ನಲಾಗಿದೆ.

ರುಬ್ಬುವ ಕಲ್ಲಿನಿಂದ ಕೊಲೆ

ಜ್ಯೂಸ್ ಸೇವಿಸಿ ಪ್ರಜ್ಞೆ ಕಳೆದುಕೊಂಡವರನ್ನು ಇಂದುಶೇಖರ್ ಒಬ್ಬೊಬ್ಬರನ್ನಾಗಿ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ, ಬಟ್ಟೆ ತೆಗೆದ ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ರಕ್ತದ ಕಲೆಗಳು ಬಟ್ಟೆಗಳಿಗೆ ತಗುಲದಂತೆ ನೋಡಿಕೊಳ್ಳಲು ಈ ವಿಧಾನ ಅನುಸರಿಸಿದ್ದ ಎನ್ನಲಾಗಿದೆ.

ಸ್ನಾನಗೃಹವನ್ನು ಸ್ವಚ್ಛಗೊಳಿಸುತ್ತಿದ್ದ ಮಗಳು

ಪ್ರತಿ ಹತ್ಯೆಯ ಬಳಿಕ ಬಾಲಕಿ ಸ್ನಾನಗೃಹವನ್ನು ಸ್ವಚ್ಛಗೊಳಿಸುತ್ತಿದ್ದಳು. ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧೆಡೆ ಎಸೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದುಶೇಖರ್‌ನ ಪೊಲೀಸ್ ಕಸ್ಟಡಿ ಬುಧವಾರ ಅಂತ್ಯಗೊಳ್ಳಲಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎನ್ನಲಾಗಿದೆ.

Must Read