28.3 C
Mangalore
Wednesday, November 18, 2026
28.3 C
Mangalore
Wednesday, November 18, 2026

ಔಷಧಿಗೂ ಮುನ್ನ ಆರೋಗ್ಯದ ಕಾಳಜಿ: ರೋಗ ತಡೆಗಟ್ಟುವಲ್ಲಿ ಪ್ರಕೃತಿ ಚಿಕಿತ್ಸೆಯ ಪಾತ್ರ ಏನು?

ಅನಾರೋಗ್ಯ ಉಂಟಾದಾಗ ವೈದ್ಯರನ್ನು ಭೇಟಿ ಮಾಡುವುದು, ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಅಗತ್ಯ ಔಷಧಿ ಪಡೆಯುವುದು ಸಹಜ. ಆದರೆ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದರ ಜೊತೆಗೆ, ರೋಗ ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನು ಮಾಡಬಹುದು? ಎಂಬ ಪ್ರಶ್ನೆಗೆ ಪ್ರಕೃತಿ ಚಿಕಿತ್ಸೆ ಜೀವನಶೈಲಿ ಆಧಾರಿತ ಉತ್ತರವನ್ನು ನೀಡುತ್ತದೆ ಬನ್ನಿ ಡಾ. ನರೇಂದ್ರ ಕೆ. ಶೆಟ್ಟಿ ಅವರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ..

ಪ್ರಕೃತಿ ಚಿಕಿತ್ಸೆ ಎಂದರೆ ಕೇವಲ ಮಣ್ಣಿನ ಚಿಕಿತ್ಸೆ ಅಥವಾ ಜಲಚಿಕಿತ್ಸೆಯಲ್ಲ. ಸಮತೋಲಿತ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ಯೋಗ, ಪ್ರಾಣಾಯಾಮ, ಸಮರ್ಪಕ ವಿಶ್ರಾಂತಿ, ಗುಣಮಟ್ಟದ ನಿದ್ರೆ ಮತ್ತು ಒತ್ತಡ ನಿರ್ವಹಣೆಯಂತಹ ಆರೋಗ್ಯಕರ ಅಭ್ಯಾಸಗಳನ್ನು ಒಟ್ಟಾಗಿ ನೋಡುವ ಸಮಗ್ರ ವಿಧಾನವಾಗಿದೆ. ದೇಹದ ಸಹಜ ಸಮತೋಲನವನ್ನು ಬೆಂಬಲಿಸಿ, ಅನಾರೋಗ್ಯಕ್ಕೆ ಕಾರಣವಾಗಬಹುದಾದ ಜೀವನಶೈಲಿ ಅಪಾಯಗಳನ್ನು ಕಡಿಮೆ ಮಾಡುವುದಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತದೆ.

ಇಂದಿನ ದಿನಗಳಲ್ಲಿ ಈ ದೃಷ್ಟಿಕೋನ ಇನ್ನಷ್ಟು ಪ್ರಸ್ತುತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೃದಯರೋಗ, ಪಾರ್ಶ್ವವಾಯು, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಶ್ವಾಸಕೋಶ ಕಾಯಿಲೆಗಳಂತಹ ಅಸಾಂಕ್ರಾಮಿಕ ರೋಗಗಳು ಜಾಗತಿಕ ಸಾವುಗಳ ಸುಮಾರು ಶೇ ೭೪ಕ್ಕೆ ಕಾರಣವಾಗಿವೆ. ತಂಬಾಕು ಬಳಕೆ, ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ, ಮದ್ಯದ ಅತಿಯಾದ ಸೇವನೆ ಮತ್ತು ವಾಯುಮಾಲಿನ್ಯ ಇವುಗಳ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ.

ಇಲ್ಲಿ ರೋಗ ತಡೆಗಟ್ಟುವಿಕೆಯೇ ಮುಖ್ಯವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ಯಾವುದೋ ಒಂದು ದಿನ ಡಯಟ್ ಮಾಡುವುದು ಅಥವಾ ಕೆಲವು ದಿನ ಯೋಗ ಮಾಡುವುದಲ್ಲ. ನಮ್ಮ ದಿನಚರಿಯಲ್ಲೇ ಆರೋಗ್ಯಕರ ಆಯ್ಕೆಗಳಿಗೆ ಜಾಗ ನೀಡಬೇಕು. ಆಹಾರ ಸೇವಿಸುವ ಸಮಯದಿಂದ ಹಿಡಿದು ನಿದ್ರೆಯವರೆಗೆ, ದೈಹಿಕ ಚಟುವಟಿಕೆಯಿಂದ ಮಾನಸಿಕ ವಿಶ್ರಾಂತಿಯವರೆಗೆ ಪ್ರತಿಯೊಂದು ಅಭ್ಯಾಸವೂ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ಆರೋಗ್ಯ ತಪಾಸಣೆಯೊಂದಿಗೆ ಇಂತಹ ಜೀವನಶೈಲಿ ಕ್ರಮಗಳನ್ನು ಪಾಲಿಸಿದಾಗ, ಆರೋಗ್ಯದ ಬಗ್ಗೆ ಸಮಸ್ಯೆ ಬಂದ ಬಳಿಕ ಯೋಚಿಸುವ ಬದಲು ಮುಂಚಿತವಾಗಿಯೇ ಕಾಳಜಿ ವಹಿಸುವ ಮನೋಭಾವ ಬೆಳೆಯುತ್ತದೆ.

ಯೋಗದಂತಹ ಜೀವನಶೈಲಿ ಕ್ರಮಗಳ ಕುರಿತು ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನಗಳೂ ಆಶಾದಾಯಕ ಅಂಶಗಳನ್ನು ದಾಖಲಿಸಿವೆ. ಕೆಲವು ಸಂಶೋಧನೆಗಳಲ್ಲಿ ಯೋಗಾಭ್ಯಾಸವು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್‌ನಂತಹ ಹೃದಯ-ಚಯಾಪಚಯ ಅಪಾಯ ಸೂಚಕಗಳ ನಿರ್ವಹಣೆಗೆ ಪೂರಕವಾಗಬಹುದು ಎಂದು ಕಂಡುಬAದಿದೆ. ಆದಾಗ್ಯೂ, ಇದನ್ನು ವೈದ್ಯಕೀಯ ಚಿಕಿತ್ಸೆಗೆ ಬದಲಿಯಾಗಿ ಪರಿಗಣಿಸಬಾರದು.

ಇಲ್ಲಿ ಮುಖ್ಯವಾದುದು ಪ್ರತಿದಿನ ನಾವು ಅನುಸರಿಸಬೇಕಾದ ಆರೋಗ್ಯ ಶಿಸ್ತು. ತಾಜಾ ಮತ್ತು ಸಮತೋಲಿತ ಆಹಾರ ಸೇವಿಸುವುದು, ಪ್ರತಿದಿನ ನಡೆಯುವುದು ಅಥವಾ ಯೋಗ ಮಾಡುವುದು, ಕೆಲ ನಿಮಿಷಗಳನ್ನು ಪ್ರಾಣಾಯಾಮಕ್ಕೆ ಮೀಸಲಿಡುವುದು, ಸಾಕಷ್ಟು ನೀರು ಕುಡಿಯುವುದು, ಸಮಯಕ್ಕೆ ಸರಿಯಾಗಿ ನಿದ್ರಿಸುವುದು ಮತ್ತು ಒತ್ತಡದಿಂದ ಮನಸ್ಸಿಗೆ ವಿರಾಮ ನೀಡುವುದು. ಇದೆಲ್ಲ ಸಣ್ಣ ಅಭ್ಯಾಸಗಳಂತೆ ಕಾಣಬಹುದು. ಆದರೆ ಇವುಗಳ ನಿರಂತರ ಪಾಲನೆಯೇ ಆರೋಗ್ಯಕರ ಜೀವನಕ್ಕೆ ಬುನಾದಿಯಾಗಬಹುದು.

ಪ್ರಕೃತಿ ಚಿಕಿತ್ಸೆಯನ್ನು ಆಧುನಿಕ ವೈದ್ಯಕೀಯಕ್ಕೆ ಪರ್ಯಾಯವಾಗಿ ಅಲ್ಲ, ಪೂರಕ ಆರೋಗ್ಯ ವಿಧಾನವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. ರೋಗ ಬಂದಾಗ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆ ಎಷ್ಟು ಮುಖ್ಯವೋ, ಆರೋಗ್ಯವಾಗಿರುವಾಗ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದೂ ಅಷ್ಟೇ ಮುಖ್ಯ.
ಆರೋಗ್ಯ ಎಂದರೆ ರೋಗವಿಲ್ಲದಿರುವುದಷ್ಟೇ ಅಲ್ಲ; ದೇಹ, ಮನಸ್ಸು ಮತ್ತು ಜೀವನಶೈಲಿಯ ನಡುವೆ ಸಮತೋಲನ ಸಾಧಿಸುವುದು. ಆ ಸಮತೋಲನ ಪ್ರತಿದಿನದ ಸಣ್ಣ, ಆದರೆ ನಿರಂತರ ಆರೋಗ್ಯಕರ ಆಯ್ಕೆಗಳಿಂದ ಆರಂಭವಾಗುತ್ತದೆ.

  • ಡಾ.ನರೇಂದ್ರ ಕೆ. ಶೆಟ್ಟಿ
    ಮುಖ್ಯ ಕ್ಷೇಮಪಾಲನಾ ಅಧಿಕಾರಿ
    ಕ್ಷೇಮವನ, ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆ

Must Read