ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗೂ ಮುನ್ನ ಯುವಜನರ ಮತ ಸೆಳೆಯಲು ರಾಜಕೀಯ ಪಕ್ಷಗಳು ಭರ್ಜರಿ ಭರವಸೆಗಳನ್ನು ನೀಡುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಬಾರಿ ಉದ್ಯೋಗ ಮತ್ತು ಆರ್ಥಿಕ ನೆರವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆ.
2027ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳು ಹಾಗೂ ಪದವೀಧರರಿಗೆ ತಿಂಗಳಿಗೆ 5,000 ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿದ್ದಾರೆ.
ಲಖನೌನಲ್ಲಿ ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ಅಖಿಲೇಶ್ ಯಾದವ್, ಇದಕ್ಕೆ ‘ಜನಮನ್ ಕಾ ಮ್ಯಾನಿಫೆಸ್ಟೊ’ ಮತ್ತು ‘ಪಿಡಿಎ ಕಾ ಪ್ರಣ್ ಪತ್ರ’ ಎಂದು ಹೆಸರಿಟ್ಟಿದ್ದಾರೆ. ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
‘ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೆ ವಾಲೇ ಹೈಂ’ (ಒಳ್ಳೆಯ ದಿನಗಳು ಬರಲಿಲ್ಲ, ಆದರೆ ಕೆಟ್ಟ ದಿನಗಳು ಮುಗಿಯಲಿವೆ) ಎಂಬ ಘೋಷಣೆಯ ಮೂಲಕ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಜೆನ್ಝಡ್ ಮತ್ತು ಜೆನ್ ಆಲ್ಫಾ ಪೀಳಿಗೆಯ ಆಶೋತ್ತರಗಳನ್ನು ಈಡೇರಿಸುವುದು ತಮ್ಮ ಪಕ್ಷದ ಬದ್ಧತೆ ಎಂದಿದ್ದಾರೆ.
ಇದನ್ನೂ ಓದಿ:
ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ 50 ಕೋಟಿವರೆಗಿನ ಕಾಮಗಾರಿಗಳಿಗೆ ಪಿಡಿಎ ಸಮುದಾಯಗಳಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದೆ. ಮಹಿಳೆಯರಿಗೆ ವಾರ್ಷಿಕ 40,000 ಆರ್ಥಿಕ ನೆರವು ನೀಡುವುದಾಗಿ ಘೋಷಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಉಚಿತ ಶಾಲಾ ಶಿಕ್ಷಣ, ಮುಚ್ಚಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಪುನರಾರಂಭ ಹಾಗೂ ಶಿಕ್ಷಣ ಮಿತ್ರರಿಗೆ ಕಾಯಂ ಉದ್ಯೋಗ ಮತ್ತು ವೇತನ ಹೆಚ್ಚಳದ ಭರವಸೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈ-ಫೈ, ವಿದ್ಯುತ್, ಬೀದಿದೀಪ ಮತ್ತು ಉತ್ತಮ ರಸ್ತೆ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಲಾಗಿದೆ.
ಇದಲ್ಲದೆ, ಉಚಿತ ಆರೋಗ್ಯ ಸೇವೆ, ಆಂಬ್ಯುಲೆನ್ಸ್ ಸೌಲಭ್ಯ, ಮಹಿಳೆಯರ ಸುರಕ್ಷತೆಗೆ ವಿಶೇಷ ಕ್ರಮ, ತ್ವರಿತ ನ್ಯಾಯಕ್ಕಾಗಿ ಫಾಸ್ಟ್ಟ್ರ್ಯಾಕ್ ನ್ಯಾಯಾಲಯಗಳು, ಪೊಲೀಸ್ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನ ಬಳಕೆ ಹಾಗೂ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.



