29.5 C
Mangalore
Friday, November 27, 2026
29.5 C
Mangalore
Friday, November 27, 2026

ಮಗು ಹುಟ್ಟಿದ ಸಂಭ್ರಮದಲ್ಲಿ ಅಪ್ಪನಿಗೂ ‘ರಜೆ ಭಾಗ್ಯ’: ವಿಜಯ್ ಸರ್ಕಾರದಿಂದ ಹೊಸ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಗುವಿನ ಜನನವೆಂದರೆ ತಾಯಿಗೆ ಮಾತ್ರವಲ್ಲ, ತಂದೆಗೂ ಜೀವನದ ಮಹತ್ವದ ಘಟ್ಟ. ಈ ಸಂಭ್ರಮದ ಸಂದರ್ಭದಲ್ಲಿ ತಾಯಿಯ ಆರೈಕೆಗೆ ನೆರವಾಗಲು ಮತ್ತು ನವಜಾತ ಶಿಶುವಿನೊಂದಿಗೆ ಸಮಯ ಕಳೆಯಲು ತಂದೆಗೂ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ರಾಜ್ಯದ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ತಮಿಳುನಾಡಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷ ಸರ್ಕಾರಿ ನೌಕರರಿಗೆ ಇಂತಹ ಸೌಲಭ್ಯ ಕಲ್ಪಿಸಲಾಗಿದೆ. ವಿವಾಹಿತ ಪುರುಷ ಸರ್ಕಾರಿ ನೌಕರರು ಈ ರಜೆಯ ಪ್ರಯೋಜನ ಪಡೆಯಬಹುದು. ಮಗುವಿನ ನಿರೀಕ್ಷಿತ ಜನನದ ದಿನಾಂಕಕ್ಕೆ 15 ದಿನಗಳು ಬಾಕಿ ಇರುವಾಗ ಅಥವಾ ಮಗು ಜನಿಸಿದ ಆರು ತಿಂಗಳ ಒಳಗೆ ಯಾವುದೇ ಸಂದರ್ಭದಲ್ಲಿ 15 ದಿನಗಳ ರಜೆ ಪಡೆಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:

https://hosadigantha.com/put-a-stop-to-pakistani-content-in-india-central-governments-stern-warning-to-netflix/#google_vignette

ಮಗುವಿನ ಜನನದ ಸುತ್ತಮುತ್ತಲಿನ ಅವಧಿ ತಾಯಿ ಮತ್ತು ನವಜಾತ ಶಿಶುವಿನ ಪಾಲಿಗೆ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿ ತಾಯಿಗೆ ದೈಹಿಕ ಮತ್ತು ಮಾನಸಿಕ ಬೆಂಬಲ ನೀಡುವುದರ ಜೊತೆಗೆ ಮಗುವಿನ ಆರೈಕೆಯಲ್ಲೂ ತಂದೆಯ ಪಾತ್ರ ಅಗತ್ಯವಾಗಿದೆ ಎಂಬುದನ್ನು ಸರ್ಕಾರ ತನ್ನ ನಿರ್ಧಾರಕ್ಕೆ ಕಾರಣವಾಗಿ ಉಲ್ಲೇಖಿಸಿದೆ.

ಈವರೆಗೆ ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 365 ದಿನಗಳ ಹೆರಿಗೆ ರಜೆ ಸೌಲಭ್ಯವಿತ್ತು. ಆದರೆ ಪುರುಷ ನೌಕರರಿಗೆ ಪಿತೃತ್ವ ರಜೆ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಇದೀಗ ನೌಕರರ ಮನವಿಗೆ ಸ್ಪಂದಿಸಿರುವ ವಿಜಯ್ ಸರ್ಕಾರ 15 ದಿನಗಳ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಇದಕ್ಕೂ ಎರಡು ತಿಂಗಳ ಹಿಂದಷ್ಟೇ ವಿಜಯ್ ಸರ್ಕಾರ ಮಹಿಳಾ ಸರ್ಕಾರಿ ನೌಕರರಿಗೆ ಮೂರನೇ ಮಗುವಿನ ಜನನಕ್ಕೂ 365 ದಿನಗಳ ಹೆರಿಗೆ ರಜೆ ವಿಸ್ತರಿಸಿತ್ತು. ಈ ಮೂಲಕ ಮೊದಲ ಎರಡು ಮಕ್ಕಳಿಗೆ ನೀಡುತ್ತಿದ್ದ ಸೌಲಭ್ಯವನ್ನೇ ಮೂರನೇ ಮಗುವಿಗೂ ಅನ್ವಯಿಸಿತ್ತು.

Must Read