32.5 C
Mangalore
Wednesday, November 18, 2026
32.5 C
Mangalore
Wednesday, November 18, 2026

ಕುಲ್ಗಾಂನಲ್ಲಿ ಮತ್ತೆ ಗುಂಡಿನ ಚಕಮಕಿ: ಲಷ್ಕರ್ ಕಮಾಂಡರ್ ಲತೀಫ್ ಭಟ್‌ಗಾಗಿ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ಆರಂಭವಾಗಿದ್ದು, ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್‌ನನ್ನು ಸೆರೆಹಿಡಿಯಲು ಜಂಟಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಇತ್ತೀಚಿನ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡ ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿದ್ದು, ಇದೀಗ ಭದ್ರತಾ ಪಡೆಗಳು ಆತನನ್ನು ಸುತ್ತುವರಿದಿರುವುದಾಗಿ ವರದಿಯಾಗಿದೆ.

ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ಕುಲ್ಗಾಂನ ಜಂಗಲ್‌ಪೋರಾ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಅಡಗಿದ್ದ ಉಗ್ರನ ಸುಳಿವು ಸಿಕ್ಕಿದ್ದು, ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆಯಲ್ಲಿ ಉಗ್ರ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಕಾಶ್ಮೀರ ವಲಯ ಪೊಲೀಸರು ಕೂಡ ಎಕ್ಸ್‌ ಖಾತೆಯಲ್ಲಿ ಎನ್‌ಕೌಂಟರ್ ಆರಂಭವಾಗಿರುವುದನ್ನು ದೃಢಪಡಿಸಿದ್ದಾರೆ. ಈ ಹಿಂದೆ ನಡೆದ ಗುಂಡಿನ ಚಕಮಕಿಯಿಂದ ತಪ್ಪಿಸಿಕೊಂಡಿದ್ದ ಲತೀಫ್ ಭಟ್‌ನ ಚಲನವಲನ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 11ರಂದು ಕುಲ್ಗಾಂನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಉಮರ್ ನಿಸಾರ್ ದಾರ್ ಹಾಗೂ ಲತೀಫ್ ಭಟ್ ಭಾಗಿಯಾಗಿದ್ದರು ಎಂಬ ಆರೋಪವಿದೆ. ಇತ್ತೀಚಿನ ಕಾರ್ಯಾಚರಣೆಯಲ್ಲಿ ಉಮರ್ ನಿಸಾರ್ ದಾರ್ ಹತನಾಗಿದ್ದು, ಲತೀಫ್ ಭಟ್ ಪರಾರಿಯಾಗಿದ್ದ ಎನ್ನಲಾಗಿದೆ.

Must Read