29.5 C
Mangalore
Friday, November 27, 2026
29.5 C
Mangalore
Friday, November 27, 2026

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಆಭರಣ ಕಾಣಿಕೆ: ಮೌಲ್ಯ ಬರೋಬ್ಬರಿ 206 ಕೋಟಿ ರೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಲು ಮುಂದಾಗಿದ್ದಾರೆ. ಅನಾಮಧೇಯ ಅನಿವಾಸಿ ಭಾರತೀಯ (ಎನ್‌ಆರ್‌ಐ) ಭಕ್ತರೊಬ್ಬರು ನೀಡುತ್ತಿರುವ ಈ ಚಿನ್ನದ ಆಭರಣಗಳ ಮೌಲ್ಯ ಅಂದಾಜು 160ರಿಂದ 206 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.

ಗುರುವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಈ ಬೃಹತ್ ಕಾಣಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗುತ್ತಿದೆ.

ಈ ಕಾಣಿಕೆಯಲ್ಲಿ ಒಟ್ಟು 45 ಚಿನ್ನದ ಆಭರಣಗಳಿದ್ದು, ಅವುಗಳನ್ನು ಒಂಬತ್ತು ಪ್ರತ್ಯೇಕ ಸೆಟ್‌ಗಳಾಗಿ ಸಿದ್ಧಪಡಿಸಲಾಗಿದೆ. ತಿರುಮಲದ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ಅಲಂಕರಿಸಲು ಅನುಕೂಲವಾಗುವಂತೆ ವಿಶೇಷ ವಿನ್ಯಾಸದಲ್ಲಿ ಆಭರಣಗಳನ್ನು ತಯಾರಿಸಲಾಗಿದೆ. ಶ್ರೀವಾರಿ ಕಿರೀಟ, ಪದ್ಮಪಾದಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಆಭರಣಗಳು ಈ ಸಂಗ್ರಹದಲ್ಲಿವೆ.

ಚೆನ್ನೈ ಮೂಲದ ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ ಈ ಆಭರಣಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಬಳಿಕ ಬಿಗಿ ಭದ್ರತೆಯೊಂದಿಗೆ ತಿರುಮಲಕ್ಕೆ ತರಲಾಗಿದೆ. ಆಭರಣಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲು ಟಿಟಿಡಿ ಅಧಿಕಾರಿಗಳು ರಂಗನಾಯಕುಳ ಮಂಟಪದಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷವಾಗಿ ನಿರ್ಮಿಸಲಾದ ಪ್ಲೈವುಡ್ ಪ್ರದರ್ಶನ ರ್ಯಾಕ್‌ಗಳನ್ನು ಬಳಸಿಕೊಳ್ಳಲಾಗಿದೆ.

ನಿಗದಿತ ಕಾರ್ಯಕ್ರಮದ ಪ್ರಕಾರ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬೆಳಗ್ಗೆ ಸುಮಾರು 10 ಗಂಟೆಗೆ ತಿರುಪತಿಗೆ ಆಗಮಿಸಿ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀವಾರಿ ದರ್ಶನ ಪಡೆಯಲಿದ್ದಾರೆ. ಬಳಿಕ ಬೆಳಗ್ಗೆ 11.30ರ ಸುಮಾರಿಗೆ ನಡೆಯುವ ದಾನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಅನಿವಾಸಿ ಭಾರತೀಯ ಭಕ್ತರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗೆ ಚಿನ್ನದ ಆಭರಣಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.

ಇಷ್ಟೊಂದು ಬೃಹತ್ ಪ್ರಮಾಣದ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ನೀಡುತ್ತಿರುವ ಭಕ್ತರ ಗುರುತನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಈ ಕಾಣಿಕೆ ತಿರುಪತಿ ದೇವಸ್ಥಾನಕ್ಕೆ ಭಕ್ತರೊಬ್ಬರು ನೀಡುತ್ತಿರುವ ಗಮನಾರ್ಹ ಕೊಡುಗೆಗಳಲ್ಲಿ ಒಂದಾಗಿದೆ.

Must Read